ನೀವು ಬರೆಯುವ ಬ್ಲಾಗ್, ನೂರಾರು ಮಂದಿಗೆ ಅರಿವಿನ ದೀಪವಾಗಬಹುದು. ಒಂದು ದೀಪದಿಂದ ಇನ್ನೊಂದು ದೀಪ ಬೆಳಗಬಹುದು. ಆ ಬೆಳಕು ವಿಶ್ವವನ್ನೇ ಬೆಳಗಬಹುದು. ಕನ್ನಡ ಪ್ರಕಾಶಿಸಬಹುದು.
...ಬನ್ನಿ ಮೊದಲು ನೀವೊಂದು ದೀಪ ಹಚ್ಚಿ.
ನೀವೂ 'ಬ್ಲಾಗ್' ಬರೆಯಿರಿ
ರಾಜಕೀಯ, ಸಿನೆಮಾ, ಕ್ರೀಡೆ, ಪ್ರವಾಸ, ಹರಟೆ, ಹವ್ಯಾಸ... ನಾನಾ ವಿಷಯಗಳಿರಬಹುದು. ಅಲ್ಲಿ ನಿಮ್ಮದು ಒಂದು ಅಭಿಪ್ರಾಯವಿರುತ್ತದಲ್ಲವೇ! ನಿಮ್ಮ ಅಭಿಪ್ರಾಯ ಮೌಲ್ಯವುಳ್ಳದ್ದಾಗಿದ್ದು, ಅದು ನಿಮ್ಮಲ್ಲೇ ಹುದುಗಿಹೊಗಬಾರದಲ್ಲವೆ? ಹಾಗಾದರೆ ನೀವು ಅದನ್ನು 'ಬ್ಲಾಗ್'ನಲ್ಲಿ ದಾಖಲಿಸಿ.
ನಿಮಗೆ ತಿಳಿದಿದ್ದನ್ನು ಇತರರೊಂದಿಗೆ ಹಂಚಿಕೊಳ್ಳಿ. ತಿಳಿಯದೇ ಇರುವುದನ್ನು ಇನ್ನೊಬ್ಬರಿಂದ ಪಡೆಯಿರಿ. ಹಾಗಾದರೆ ಬನ್ನಿ ಬ್ಲಾಗ್ ಲೋಕಕ್ಕೆ.
ಏನಿದು 'ಬ್ಲಾಗ್'?
'ಬ್ಲಾಗ್' ಎಂದರೆ ಇಂಟರ್‌ನೆಟ್'ನಲ್ಲಿ ಕಾಗದದ ಚೂರಿನಂತೆ. ಕಂಪ್ಯೂಟರ್ ಪರದೆಯ ಮೇಲಿರುವ ಈ ಕಾಗದದ ಚೂರು ಯಾವುದಾದರೊಂದು ವಿಷಯದ ಬಗ್ಗೆ ಮಾಹಿತಿ ಹೊಂದಿರುತ್ತದೆ.
ನಿಮಗೆ ತಿಳಿದಿರುವ ವಿಷಯವನ್ನು ಸಮಾನ ಮನಸ್ಕರು ಇಲ್ಲಿ ಹಂಚಿಕೊಂಡಿರುತ್ತಾರೆ. ತಮ್ಮ ಅಭಿಪ್ರಾಯಗಳನ್ನು ಚರ್ಚಿಸಿರುತ್ತಾರೆ. ಬ್ಲಾಗ್ ಎಂದರೆ ಮಾಹಿತಿಯ ಆಗರ, ಜ್ಞಾನದ ಸಾಗರ...!
ಬಣ್ಣಿಸಲೆಂತು ಬ್ಲಾಗಿನ ಮಹಿಮೆ
ನೀವು ಬ್ಲಾಗ್'ನಲ್ಲಿ ಗೀಚಿದ್ದನ್ನು ಸಾವಿರಾರು ಕಣ್ಣುಗಳು ಓದುತ್ತಿರುತ್ತವೆ. ಅನೇಕರ ಅಭಿಪ್ರಾಯಗಳ ಮೇಲೆ ನಿಮ್ಮ ಬ್ಲಾಗ್ ಪರಿಣಾಮ ಬೀರಬಲ್ಲದು. ಹಲವರ ಸಂವೇದನೆಗಳಿಗೆ ಸ್ಪಂದಿಸಬಲ್ಲದು.
ನಿಮ್ಮ ಬರಹಗಳು ಮಾಹಿತಿಪೂರ್ಣವಾಗಿದ್ದಲ್ಲಿ ವಾರ್ತಾ ಪತ್ರಿಕೆಗಳಲ್ಲಿ ಅವು ಪ್ರಕಟಗೊಳ್ಳಲುಬಹುದು. ಪಾಶ್ಥಿಮಾತ್ಯ ದೇಶಗಳಲ್ಲಿ ಬ್ಲಾಗ್ ಬರಹಗಾರ ಗುಂಪೇ ಇದೆ. ಬ್ಲಾಗ್ ಬರಹಗಾರರು ಸೆಲೆಬ್ರಿಟಿಗಳಾಗಿದ್ದಾರೆ. ದೇಶದ ಸಾಮಾಜಿಕ, ರಾಜಕೀಯ ಪರಿಸ್ಥಿತಿಯನ್ನು ಬ್ಲಾಗ್ ಬದಲಿಸಬಲ್ಲದು.
ಬ್ಲಾಗಿಸಿ ಕನ್ನಡ ಡಿಂಡಿಮ
ಆಂಗ್ಲ ಭಾಷೆಯಲ್ಲಿ ಜನಪ್ರಿಯವಾಗಿರುವ ಈ ಬ್ಲಾಗ್'ಗಳು ಕನ್ನಡದಲ್ಲೂ ಜನಪ್ರಿಯವಾಗಬೇಕೆಂಬುದು ನಮ್ಮ ಆಶಯ.
ನಮ್ಮ ಮಾತೃಭಾಷೆ ಕನ್ನಡ ವೇಗವಾಗಿ ಅಳಿಯುತ್ತಿರುವ ಭಾಷೆಗಳಲ್ಲೊಂದು. ಸಿಲಿಕಾನ್ ನಾಗರ ಬೆಂಗಳೂರು ಕನ್ನಡದ ರಾಜಧಾನಿಯಾದರೂ ಇಲ್ಲಿ ಕನ್ನಡಕ್ಕೆ ಕೊನೆಯ ಸ್ಥಾನ. ಬಿಡುವಿಲ್ಲದ ಯಾಂತ್ರಿಕ ಜೀವನದ ಬಿಯುಸಿರಿನಲ್ಲಿ ನಮ್ಮ ಕನ್ನಡ ಮನಸ್ಸುಗಳು ಕಮರಿ ಹೋಗುತ್ತಿವೆ. ಈ ಎಲ್ಲ ಮನಸ್ಸುಗಳನ್ನು ಒಂದುಗೂಡಿಸಿ, ಕನ್ನಡದ ಕಂಪನ್ನು ಹಾರಡಬೇಕೆಂಬುದೇ ಈ ಕನ್ನಡ ಬ್ಲಾಗ್'ಗಳ ಮುಖ್ಯ ಉದ್ದೇಶ.
ಬ್ಲಾಗಾಮಂಡಲಕ್ಕೆ ನೀವು ಬನ್ನಿ
ಬ್ಲಾಗ್' ಬರೆಯಲು ನೀವು ದೊಡ್ಡ ಬರಹಗಾರರಾಗಿರಬೇಕಿಲ್ಲ. ಕನ್ನಡ ಬಗ್ಗೆ ಪ್ರೀತಿಯಿದ್ದು ಕನ್ನಡ ಬರೆಯಲು ಬರುತ್ತಿದ್ದರೆ ಸಾಕು.
ತಡ ಮಾಡಬೇಡಿ. ನಿಮಗನ್ನಿಸಿದ್ದನ್ನು ನೀವು ಬರೆಯಲು ಶುರು ಮಾಡಿ. ಬೇರೆಯವರು ಬರೆದದ್ದನ್ನು ಓದಿ.
ಕನ್ನಡಕ್ಕಾಗಿ ಕೈಯೆತ್ತಿ, ನಿಮ್ಮ ಕೈ ಕಲ್ಪವೃಕ್ಷವಾಗಬಹುದು.
ಹಚ್ಚೋಣ 'ಬ್ಲಾಗ್'' ಎಂಬ ದೀಪ
ನೀವು ಬರೆಯುವ ಬ್ಲಾಗ್, ನೂರಾರು ಮಂದಿಗೆ ಅರಿವಿನ ದೀಪವಾಗಬಹುದು. ಒಂದು ದೀಪದಿಂದ ಇನ್ನೊಂದು ದೀಪ ಬೆಳಗಬಹುದು. ಆ ಬೆಳಕು ವಿಶ್ವವನ್ನೇ ಬೆಳಗಬಹುದು. ಕನ್ನಡ ಪ್ರಕಾಶಿಸಬಹುದು.
...ಬನ್ನಿ ಮೊದಲು ನೀವೊಂದು ದೀಪ ಹಚ್ಚಿ.